Dec 15, 2010

ಮಮತಾಮಯಿ

ಮತ್ತೆ ಮಮತಾಮಯಿ ಅಮ್ಮನ
ಸತ್ಯದರ್ಶನ;
ಕೊಟ್ಟಷ್ಟೂ ಕಿತ್ತುಕೊಳ್ಳುವ ಕೋತಿಗಳಿಗೆ,
ತುತ್ತು ಹಂಚುವ ಕೆಲಸ!!
ವಾನರನಿಂದ ನರ ಎಂಬುದು,
ನಮಗೆ ತಿಳಿದಿದೆಯಷ್ಟೇ;
ಆದರೆ,
ವಾನರರಲ್ಲೂ ನರನನ್ನು
ಕಾಣುತ್ತಿದ್ದಾಳೆ ತನ್ನ ವಿಶಾಲ ದೃಷ್ಟಿಯಿಂದ!

ಹೆತ್ತು ಸಾಕಿದ ಮಕ್ಕಳೆಲ್ಲ ದೂರ ದೂರ,
ಹೃದಯವಂತೂ ಭಾರ..
ನನಗೆ ಕಪಿಗಳದ್ದು  ಕೇವಲ ಕುಚೇಷ್ಟೆಯಲ್ಲ;
ಹರಸಾಹಸ ಮಾಡುತಿವೆ ಅವು,
ನನ್ನ ಮನಸನ್ನು ಹಗುರ ಮಾಡಲು.
ಇದು ತಾಯಿಯ ಒಡಲಾಳದ ನುಡಿ!!

ಮರದಿಂದಿಳಿದ ಮರ್ಕಟಗಳಿಗೆಲ್ಲಾ,
ಅವ್ವ  ನೀಡುವ ತುತ್ತು ಮೃಷ್ಟಾನ್ನ ;
ಅವಳ ಮನಸ್ಸೂ ಪ್ರಸನ್ನ !!
ಜೀವನ ಯಾನದಲ್ಲಿ,
ಬಹುಪಾಲು ಕ್ರಮಿಸಿದ ಮೇಲೂ
ಬತ್ತದ ಪ್ರೀತಿಯ ಚಿಲುಮೆ ಇವಳು.
ಮಾತೃ ಪಾದಕ್ಕಿದೋ ನಮನ!! (ಚಿತ್ರ ಕೃಪೆ:ಮಯೂರ )
-----------------------------------------------------------------------------------------

Sep 23, 2010

ಎಲ್ಲಿಗೆ ಈ ಪಯಣ?[ಭಾಗ ೨ ]

--------------------------------------------------------------------------------------------
ಆತ್ಮಹತ್ಯೆನಾ....ಇಲ್ಲ...ಅದೆಷ್ಟೋ ವ್ಯಕ್ತಿತ್ವವಿಕಸನ ಕಾರ್ಯಕ್ರಮ ನಡೆಸಿಕೊಟ್ಟ ನಾನು ಯಾಕೆ ಇಷ್ಟು ಹುಚ್ಚು ಹುಚ್ಚಾಗಿ ಯೋಚಿಸ್ತಾ ಇದ್ದೇನೆ..ನನಗೇನು ಆಗ್ತಾ ಇದೆ!!
ಬೇರೆ ವಾಹನದವರೆಲ್ಲ ದಾರಿ ಬಿಡುತ್ತಿದ್ದಾರೆ ನನಗೆ ..ಅಂಬ್ಯುಲೆನ್ಸ್ ಗೆ  ದಾರಿ ಕೊಟ್ಟಂತೆ!!
ಬೈಕ್ ವೇಗ ಜಾಸ್ತಿಯಾಯಿತು!ಬಹುಷಃ ಇದಕ್ಕಿಂತ ವೇಗವಾಗಿ ಹೋಗಲಾರೆನೇನೋ!

ಆಗ ಬಂತು ಫೋನ್ ಕಾಲ್..
ಮನೆಯಿಂದ ಆಗಿರಬಹುದಾ ಅಥವಾ ನವ್ಯನಾ? ರಿಸೀವ್ ಮಾಡಿ ಮಾತಾಡೋದಾ?
ಉಹುಂ ..ಬೇಡ ಎಂದೆನಿಸಿತು...ತಿರುವು ರಸ್ತೆ ಬೇರೆ.ಆದರೂ ಕುತೂಹಲಕ್ಕೆ ಯಾರ ಕಾಲ್ ಆಗಿರಬಹುದು ಎಂದು ಜೇಬಿಗೆ ಕೈ ಹಾಕಿದೆ..ಆಗಲೇ ಧುತ್ತೆಂದು ಪ್ರತ್ಯಕ್ಷವಾಯಿತು;ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಬರುತ್ತಿದ್ದ ಆಟೋರಿಕ್ಷಾ...
ಬೈಕ್ ನನ್ನ ನಿಯಂತ್ರಣಕ್ಕೆ ಬರುತ್ತಿಲ್ಲ...
ಇಲ್ಲ....ಒಹ್ ಮೈ ಗಾಡ್ ...ಬ್ರೇಕ್ ಫೈಲ್!!!
ಏನೂ ಮಾಡುವುದಕ್ಕೆ ತೋಚುತ್ತಾ ಇಲ್ಲ..ಆಗಿಯೇ ಹೋಯಿತು ಆಕ್ಸಿಡೆಂಟ್!!
ಅಷ್ಟು ದೂರ ಹೋಗಿ ಬಿದ್ದೆ...ಕಣ್ಣು ಮಂಜಾಯ್ತು!!
ಏನೂ ಕಾಣಿಸ್ತಾ ಇಲ್ಲ..ಕೂಗಲು ಪ್ರಯತ್ನಿಸುತ್ತಾ ಇದ್ದೇನೆ..ಅಗ್ತಾ ಇಲ್ಲ!!
ಹಿಂದೆಯಿಂದ ಯಾರೋ ಬಂದು ಎಬ್ಬಿಸುತ್ತಾ ಇರುವ ಹಾಗೆ ಅನ್ನಿಸ್ತು ....
          
*******************************************************

ಟೀ ಕಪ್ ಕೆಳಗೆ ಬಿದ್ದು ಒಡೆದು ಹೋಗಿತ್ತು!!
ಹೌದು ಮೊಬೈಲ್ ರಿಂಗ್ ಆಗ್ತಾ ಇದೆ "ಸ್ವೀಟ್ ಹಾರ್ಟ್ ಕಾಲಿಂಗ್"ಅಂತ ತೋರಿಸುತ್ತ!! 
ಬಹುಷಃ ತುಂಬಾ ಸರಿ ಕಾಲ್ ಮಾಡಿರಬೇಕು ಅಂತ ಅನ್ನಿಸ್ತು.ನಾಯಿ ಜೋರಾಗಿ ಬೊಗಳ್ತಾ ಇದೆ.ಕೆಲಸದಾಳು ರಂಗಯ್ಯ  ಬಂದು "ಚಿಕ್ಕೆಜಮಾನ್ರೆ..ಪಕ್ಕದ್ಮನೆ ಐನೋರ ಅಡಿಕೆ ಶೆಡ್ಡಿಗೆ ಬೆಂಕಿ ಬಿದ್ದಿದೆ..ನೀವೇನು ಇಲ್ಲೇ ಇದ್ದೀರಾ?ಎಲ್ಲಾ ಹೊಗೆ ತುಂಬಿ ಬುಟ್ಟದೆ ಗೊತ್ತಾ?ಬೆಂಕಿ ನಂದ್ಸೋದ್ಕೆ ಅಗ್ನಿಸಾಮಕದಲದವ್ರು ಬಂದವ್ರೆ...ಬನ್ನಿ ಒಸಿ ಆಕಡಿಕ್ಕೆ ಓಗೋವಾ "ಅಂತ ಅವನ ಭಾಷೆಯಲ್ಲೇ ಬಡಬಡಿಸಿಕೊಂಡು ಓಡಿ ಹೋದ.
ವಾಸ್ತವಕ್ಕೆ ಬರಲು ಕಷ್ಟವಾಗ್ತಾ ಇದೆ ನನ್ನಿಂದ!
ಒಹ್ ಕನಸೆಲ್ಲಾ ತಡರಾತ್ರಿ ತನಕ ಸಿನೆಮಾ ನೋಡಿದ ಪ್ರಭಾವ ಎಂದೆನಿಸಿ " ವಿಲ್ ಕಾಲ್ ಯು ಲೇಟರ್..ಬೇಜಾರು ಮಾಡ್ಕೋಬೇಡ ಪ್ಲೀಸ್" ಅಂತ ನವ್ಯಳಿಗೆ ಮೆಸೇಜ್ ಮಾಡಿ,ಟವೆಲ್ ನಿಂದ ಮುಖದ ಬೆವರೊರೆಸಿಕೊಂಡು ಬೆಂಕಿ ಬಿದ್ದಿರುವ ಮನೆಯ ಕಡೆ ಹೆಜ್ಜೆ ಹಾಕಿದೆ!!

------------------------------------------------------------------------------------------

Aug 16, 2010

ಎಲ್ಲಿಗೆ ಈ ಪಯಣ?

                        

ಸ್ವಲ್ಪ ದಿನಗಳ ಹಿಂದೆ ಬರೆದ ಕತೆಗೆ ಅಂತಿಮ ಸ್ಪರ್ಶ ನೀಡಿ ಇಲ್ಲಿ ಟಪ್ಪಾಲು ಮಾಡಿದ್ದೇನೆ.. 
ಭಾಗ ೧ ಇಲ್ಲಿದೆ..ಶೀಘ್ರದಲ್ಲೇ ಮುಂದುವರಿದ ಭಾಗವನ್ನು ಓದುವಿರಂತೆ...ನಿಮ್ಮ ಅಭಿಪ್ರಾಯದ ನಿರೀಕ್ಷೆಯಲ್ಲಿ....
------------------------------------------------------------------------------------------
        
                                                                                                                             
        ತುಂಬಾ ವೇಗವಾಗಿ ಡ್ರೈವ್ ಮಾಡ್ತಾ ಇದ್ದೇನೆ ಅಂತ ನಂಗೆ ಗೊತ್ತಿದ್ರೂ ಇನ್ನೂ ಎಕ್ಸಲೇಟರ್ ಅದುಮುತ್ತಲೇ ವೇಗ ಹೆಚ್ಚಿಸುತ್ತಾ ಇದ್ದೆ.ಪಕ್ಕದಲ್ಲಿ ಹಾದು ಹೋಗುತ್ತಿರುವ ಜನರು,ವಾಹನದವರು ಎಲ್ಲಾ ಇದೇನು ಹುಚ್ಚು ಎನ್ನುವಂತೆ ನೋಡುತ್ತಿದ್ದರು.ನನ್ನನ್ನು ನಿಯಂತ್ರಿಸಬೇಕಾಗಿದ್ದ ಮನಸ್ಸು ತನ್ನ ನಿಯಂತ್ರಣ ಕಳೆದುಕೊಂಡಿತ್ತು.ಒಮ್ಮೆ ಬರೀ ನಿಶ್ಯಬ್ಧ.. ಬೆನ್ನು ಬೆನ್ನಿಗೇ ಏನೇನೋ ಆಲೋಚನೆಗಳು.ಭೂಮಿ ಬಿಟ್ಟು ನಾನೆಲ್ಲೋ ಹಾರುತ್ತಿರುವಂತೆ ತಲೆಯೆಲ್ಲಾ ಅಲ್ಲಾಡುತ್ತಿರುವಂತೆ  ಭಾಸವಾಗುತಿತ್ತು.ಎಲ್ಲಿಗೆ ಪಯಣ?ಏನೋ ಗೊತ್ತಿಲ್ಲ.ಆದ್ರೆ ಒಂದಂತೂ ನಿಜ...ಒಂದೇ ಕಡೆ ಇರುವ ಪರಿಸ್ಥಿತಿಯಲ್ಲಿ ಸಧ್ಯ ನಾನಿಲ್ಲ!
   
******************************

        ಮನೆಯಲ್ಲಿ ಹೀಗೆನ್ನುತ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ."…ನಿಂಗೆ ಹುಡುಗೀನೇ ಹೆಚ್ಚಾಗಿದ್ರೆ ನೀನು ಹೋಗು ನಿನ್ನ ಪಾಡಿಗೆ..ಮನೆ ಹತ್ತಿರ ಮಾತ್ರ ಸುಳೀಬೇಡ .ನಿನ್ನಂತ ಮಗನ ಅಗತ್ಯ ನಮಗಿಲ್ಲ.."ಎಂದು ಪಪ್ಪ ಹೇಳಿದಾಗ ಆಕಾಶ ತಲೆಮೇಲೆ ಬಿದ್ದಂತಾಗಿತ್ತು.ಆದರೂ ಕೊನೆ ಕ್ಷಣ ನಿರ್ಧಾರ ಬದಲಿಸ್ತಾರೋ ಅಂತ ಅಮ್ಮನ ಕಡೆ ಮುಗ್ಧವಾಗಿ ನೋಡಿದಾಗ "ಅಲ್ಲಾರೀ.. ಚಿಕ್ಕಂದಿನಿಂದ ತುಂಬಾ ಮುದ್ದು ಮಾಡಿ ಬೆಳೆಸ್ತೀವಲ್ಲಾ ಎಲ್ಲಾ ಅದರ ಪ್ರಭಾವ...ಈಗ ದೊಡ್ಡವನಾಗಿ ಬಿಟ್ಟ ಅಲ್ವಾ..ನಮ್ಮ ಮಾತು ಎಲ್ಲಿ ಕೇಳ್ತಾನೆ. ಅವನ ಫ್ರೆಂಡ್ಸ್ ನೋಡಿ; ಎಲ್ಲಾ ಅಂತವರೇ..ಒಂದ್ಸಾರಿ ಬುದ್ಧಿ ಹೇಳಿ ಅಂದ್ರೆ ನೀವು ಕೂಡ ವಿಚಾರಿಸಿಲ್ಲ..ನಮ್ಮ ಪ್ರವೀಣ..ನಮ್ಮ ಪ್ರವೀಣ ಅಂತಿದ್ರಿ..ಗೊತ್ತಾಯ್ತಾ..ಈಗ ನೋಡಿ ಪ್ರೀತಿ ವಿಷಯ ಮಟ್ಟಕ್ಕೆ ಬಂದು ನಿಂತಿದೆ.ಕೃಪಾಕರ್ ಮಗಳನ್ನು ಮದುವೆ ಆಗ್ತಾನಂತೆ ಇವನು.ಅಲ್ಲಾ ನಮಗೇನು; ಇಡೀ ಊರಿಗೇ ಗೊತ್ತಿದೆ ಅವರು ಎಂತವರು ಅಂತ.ಅಪ್ಪ ಮಗ ಇಬ್ಬರೂ ಕೆಟ್ಟವರೇ.ಅವರು ಸಂಪಾದಿಸಿರೋ ಆಸ್ತಿಯೆಲ್ಲಾ ಕಳ್ಳ ದಂಧೆಯಿಂದಲೇ.ಅವರ ಮಗ ಕಳೆದ ವಾರವಷ್ಟೇ ಜೈಲಿಂದ ಬಂದಿದ್ದಾನೆ.ಮತ್ತೆ ಮನೆ ಹುಡುಗಿಯನ್ನು ಮನೆ ತುಂಬಿಸಿಕೊಳ್ಳುವುದಾ..? ಮನೆ ಸಂಬಂಧ ಮಾಡೋದ್ಕಿಂತ ಸಾಯೋದೇ ವಾಸಿ.."ಅಂತ ಅವರ ಕೊನೆಯ ಮಾತು ಹೇಳಿ ಪಪ್ಪನ ಪರವಾಗಿ ನಿಂತರು. 
ಅದಕ್ಕೆ ಪಪ್ಪ"ಅಲ್ಲಾ..ನಾವ್ಯಾಕೆ ಸಾಯಬೇಕು..ಇವನನ್ನು ಚೆನ್ನಾಗಿ ಸಾಕಿ ನಮ್ಮ ಕರ್ತವ್ಯವನ್ನು ಮುಕ್ಕಾಲು ಪಾಲು ಮುಗಿಸಿದ್ದೀವೀ ..ನಾವು ಹೇಳಿದ ಮಾತು ಕೇಳೋಲ್ಲ ಅಂದಮೇಲೆ ಅವನು ಏನ್ ಬೇಕಾದ್ರೂ ಮಾಡ್ಕೊಳ್ಳಿ ಬಿಡು..." ಅಂತ ಹೇಳಿದರು. 
ಹೌದು ಇದು ಪಪ್ಪನ ಕಡೆ ನಿರ್ಧಾರ.. 
ಅಮ್ಮನೂ ವಿರೋಧಿಸಿದ್ದರಿಂದ ಇನ್ನೂ ಅವ್ರು ಒಪ್ಪಿಕೊಳ್ಳುವ ಸೂಚನೆ ಇಲ್ಲ!
ನಾನು ಹೆಚ್ಚೇನೂ ಮಾತಾಡುವ ಹಾಗಿಲ್ಲ. ಪಪ್ಪ ಅಂದ್ರೆ ಅಷ್ಟು ಭಯ ನಂಗೆ.ಚಿಕ್ಕಂದಿನಿಂದಲೂ ಅವರ ಎದುರು ನಾನು ಮೌನಿಯಾಗಿದ್ದುದೇ ಹೆಚ್ಚು.ಹೇಗೋ ಅಮ್ಮನ ಮೂಲಕ ಒಂದು ಮನವಿ ಸಲ್ಲಿಸಿದ್ದೆ.ಅದೂ ಕೈಕೊಟ್ಟಿತ್ತು !! 
ಅಮ್ಮ ಕೂಡ ಯಾಕೆ ಹಾಗೆ ಮಾತಾಡಿದ್ರು ಅಂತ ಗೊತ್ತಾಗ್ಲಿಲ್ಲ..ಪಾಪ ಅವರಿನ್ನು ಏನು ತಾನೇ ಮಾಡಿಯಾರು.ಶ್ರೀಧರ್ ಅಂದ್ರೆ ತುಂಬಾ ಶಿಸ್ತಿನ ಮನುಷ್ಯ ಅಂತ ಹೇಳ್ತಾ ಇದ್ದರು ಊರಲ್ಲಿ ಎಲ್ಲರೂ.ಹೌದು ಅವರು ತೆಗೆದುಕೊಳ್ಳುವ ನಿರ್ಧಾರಗಳು ಹಾಗೇನೆ..ಒಂದು ಸಾರಿ ಹೇಳಿದರೆ ಮುಗಿಯಿತು ಮತ್ತೆ ಬದಲಾವಣೆ ಇಲ್ಲ. ಎಂದಿಗೂ... ಎಂದೆಂದಿಗೂ!!

         
ಏನು ಮಾಡಬೇಕು ಅಂತ ತೋಚದೆ ನನ್ನ ಕೋಣೆಗೆ ಹೋಗಿ ಬಾಗಿಲು ಹಾಕಿ ಕುರ್ಚಿಮೇಲೆ ಸತ್ತಂತೆ ಬಿದ್ದುಕೊಂಡೆ! ಮನೆಯವರಿಂದ ದೂರಹೋಗಿ ಬದುಕಬೇಕು ಎಂದು ಪ್ರೇರೇಪಿಸುವ   ಹಾಳು ಪ್ರೀತಿ ಅದ್ಯಾಕೆ ಇನ್ನೂ ಭೂಮಿ ಮೇಲೆ ಇದೆ ಅಂತ ಅನ್ನಿಸ್ತು ಒಂದು ಕ್ಷಣ! ಮನೆಯವರ ಮಾತು ಕೇಳೋದಾ,ಅವಳನ್ನು ಮರೆತುಬಿಡೋದಾ?? ಉಹುಂ..ಇದು ಆಗದೆ ಇರುವ ಕೆಲಸವೆಂದು ಯೋಚಿಸ್ತಾ ಇರುವಾಗಲೇ ಟೇಬಲ್ ಮೇಲೆ ಕೂತಿದ್ದ ನನ್ನ ಹುಟ್ಟುಹಬ್ಬದ ದಿನ ನವ್ಯ ಕೊಟ್ಟಿದ್ದ ಮೊಲದ ಗೊಂಬೆ ನನ್ನನ್ನೇ ದಿಟ್ಟಿಸುತಿತ್ತು!! ಸಿನೆಮಾಗಳಲ್ಲಿ ಆಗುವಂತೆ ಕೊನೆ ಕ್ಷಣದಲ್ಲಿ ತಂದೆತಾಯಿಯರಿಗೆ ಜ್ಞಾನೋದಯವಾಗಿ ಅವರು ಮದುವೆಗೆ ಒಪ್ಪಿಗೆ ಕೊಡುವಂತಹ ಸಂಭವವೇನು ಇಲ್ಲ ಅಂತನಿಸಿತು!!


        ನವ್ಯಳಿಗೆ ಒಮ್ಮೆ ಫೋನ್ ಮಾಡಿ ಎಲ್ಲಾ ವಿಷಯ ಹೇಳ್ತೀನಿ ಅವಳು ಏನ್ ಹೇಳ್ತಾಳೋ ನೋಡೋಣ ಅಂತ ಮೊಬೈಲ್ ಕೈಗೆತ್ತಿಕೊಂಡೆ.ಅವಳು ಪಾಪ ಇನ್ನೇನು ಮಾತಾಡ್ತಾಳೆ "ಎಲ್ಲಾ ನಿನ್ನಿಷ್ಟ ಪ್ರವೀಣ್" ಅಂತ ಎಷ್ಟು ಬೇಜಾರಾಗಿದ್ರೂ  ಹೇಳ್ತಾಳೆ, ಟೈಮಲ್ಲಿ ಅವಳಿಗೆ ಸುಮ್ನೆ ಯಾಕೆ ನೋವು ಕೊಡೋದು;ಬೇಡ ಎಂದು ಮೊಬೈಲ್ ಮತ್ತೆ ಟೇಬಲ್ ಮೇಲಿಟ್ಟೆ.. 
ಇನ್ನೇನು ಮಾಡುವುದು..ಗೊತ್ತಾಗ್ತಿಲ್ಲ...
ಹೇ ಇಲ್ನೋಡು... ನಾನಿದ್ದೀನಿ ಅಲ್ವಾ ನಿನ್ನ ಜೊತೆ ಅಂತ ಹೇಳುವ ಹಾಗೆ ಕಿಟಕಿಯ ಆಚೆ ಕಡೆ ಬೈಕ್ ನಿಂತಿತ್ತು!
ಸರಿ ನಾನೆಲ್ಲೋ ಹೋಗ್ಬೇಕು ..
ಎಲ್ಲಿಗೆ ??
ಉಹುಂ...ಅದು ಗೊತ್ತಿಲ್ಲ!!
ಹೊರಬಂದು ಬೈಕ್ ಬೆನ್ನು ಹತ್ತಿ ಕೂತೆ..ಎಷ್ಟು ತುಳಿದರೂ ಸ್ಟಾರ್ಟ್ ಆಗ್ತಾನೇ ಇಲ್ಲ..ಅಮ್ಮ ಒಳಗಡೆಯಿಂದ "ಅವನೆಲ್ಲೋ ಹೋಗ್ತಾ ಇದ್ದಾನೆ ನೋಡಿ ಒಮ್ಮೆ..." ಅಂತಂದಿದಕ್ಕೆ ಪಪ್ಪ, "ಅವನೆಲ್ಲಿ ಬೇಕಾದ್ರೂ ಹೋಗ್ತಾನೆ ನಿನಗ್ಯಾಕೆ ಈಗ..ಸುಮ್ನೆ ಒಳಗೆ ಹೋಗಿ ನಿನ್ನ ಕೆಲಸ ನೋಡ್ಕೋ...ಯಾರು ಎಲ್ಲಿ ಹೋದರು ಕೊನೆಗೆ ಮನೆಗೆ ಬರಲೇ ಬೇಕು"ಹೇಳಿದ ಹಾಗೆ ಕೇಳಿಸಿತು. ಬೇಸರ,ಅಳು,ಕೋಪ ಎಲ್ಲಾ ತುಂಬಿಕೊಂಡಿದ್ದ ನಂಗೆ ಇನ್ನೂ ಸಿಟ್ಟು ಬಂದಂತಾಗಿ ಜೋರಾಗಿ ತುಳಿದಾಗ ಬೈಕ್ ಸ್ಟಾರ್ಟ್ ಆಯಿತು!!
              
************************

       ಹೊರಬಂದಾಗ ಯಾವಾಗಲೂ ಹೋಗುತ್ತಿದ್ದ ದಾರಿಯಲ್ಲಿ ಎಲ್ಲವೂ ವಿಚಿತ್ರವಾಗಿ ಕಂಡಿತು..ಅಲ್ಲಾ ನನ್ನನ್ನು ವಿಚಿತ್ರವಾಗಿ ಅಣಕಿಸುತ್ತಿದ್ದವೋ ಏನೋ!?
ಅನೀರೀಕ್ಷಿತವಾಗಿ ಅವಳ ಪರಿಚಯವಾದದ್ದು..ನಾವು ಆತ್ಮೀಯರಾಗಿದ್ದು..ಪ್ರಣಯಾಂಕುರವಾಗಿದ್ದು ಎಲ್ಲವೂ ಮನಃಪಟಲದಲ್ಲಿ ಫ್ಲಾಶ್ ಬ್ಯಾಕ್   ಹಾಗೆ ಮೂಡಿ ಬಂದವು.ನಾನು ಮುದ್ದು ಮನಸ್ಸಿನ ಹುಡುಗಿಯ ಪ್ರೇಮಿಯಾಗಿದ್ದು ತಪ್ಪಲ್ಲ ಎಂದೆನಿಸಿತು!! 
ಹೌದು..ನಾನು ಹೆಚ್ಚೋ..ಅವಳು ಹೆಚ್ಚೋ,ಎಂದು ಸ್ಪರ್ಧೆಯಲ್ಲಿರುವಂತೆ ಪರಸ್ಪರ ಪ್ರೀತಿಸುತಿದ್ದೇವೆ!!
ನನ್ನ ಮನೆಯಲ್ಲೇ ಈಗ ಇಷ್ಟೊಂದು ರಾದ್ಧಾಂತ ಆಗಿದೆ ಅಂದರೆ, ವಿಷಯ ಅವಳ ಮನೆಯವರ ಗಮನಕ್ಕೆ ಬಂದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸಬಹುದು....
ಮುಂಚೆನೇ ಅವಳ ಮನೆ ಒಂಥರಾ ಜೈಲ್ ಇದ್ದ ಹಾಗಿದೆ!!
ಇಲ್ಲ....ಊಹಿಸಲಾಗುತ್ತಿಲ್ಲ ನನ್ನಿಂದ!
ಸುಳಿಯಲ್ಲಿ ದೋಣಿ ಸಿಕ್ಕಿರುವಾಗ ದಡ ಸೇರುವ ನಂಬಿಕೆ ಕಳೆದುಕೊಂಡ ಅಂಬಿಗನಂತೆ ಆಗ್ತಾ ಇದ್ದೇನೆ!
ಜೀವನ ಪ್ರಯಾಣದಲ್ಲಿ ಅವಳಿಗೆ ನಾನು ಸಿಕ್ಕಿದ್ದು ತಪ್ಪೇ? ಪ್ರೀತಿಸಿದ್ದು ತಪ್ಪೇ?
ಅರಿವಿಲ್ಲದೆ ನನ್ನನ್ನೇ ದ್ವೇಷಿಸಲಾರಂಭಿಸುತ್ತಿದ್ದೇನೆ!!
ಅವಳನ್ನು ಮತ್ತೆ ಮನೆಯಲ್ಲಿ ಹೆತ್ತವರನ್ನು ;ಎರಡೂ ಕಡೆಯೂ ಸಂತುಷ್ಟಿಗೊಳಿಸುವ ಯಾವ ದಾರಿ ಕೂಡ ಕಾಣಿಸ್ತಾ ಇಲ್ಲ ..
ಅದರೆ ಇನ್ನೂ ಒಂದೇ ಒಂದು ದಾರಿ ಉಳಿದಿದೆ..
ಏನದು......?  
ಹೌದು ಇದೊಂದೇ ಪರಿಹಾರ..
ಆತ್ಮಹತ್ಯೆ!?


(ಮುಂದುವರೆಯುವುದು ....)
 ------------------------------------------------------------------------------------------

Aug 9, 2010

ಅಡಗಿ ಕೂತು...

ಅಡಗಿ ಕೂತು ಕಾಡುವಾಟ ಸಾಕಾಗಿದೆ ಬೇಡ ಇನ್ನು..
ಕರಗಿ ಹೋಗೋ ಮಂಜಿನಂತೆ ಸೋತೆನೀಗ ನಾನು..
ಬಯಸುವಾಗ ಬಳಿಗೆ ಬರುವೆನೆಂದ ಮಾತು ಮರೆತೆಯಾ ..
ಇನ್ನೂ ಎಷ್ಟು ಬರೆಯಬೇಕು ಹೀಗೆ ವಿರಹ ಕವಿತೆಯಾ.. // //

ಅಳುತಿದೆ ಹೃದಯ ನೀ ಬರದಾ ಬೇನೆಯಲ್ಲಿ..
ಸಭೆ ಸೇರಿವೆ ಭಾವನೆಗಳು ಮನದಾ ಕೋಣೆಯಲ್ಲಿ..
ಅದೇನೋ ಬಹಳ ಗಹನವಾದ ಮಾತುಕತೆ ನಡೆಯುತಿದೆ ..
ಬಿದ್ದು ಅತ್ತೂ..
ಎದ್ದೂ ಮತ್ತೇ...
ಹೆಜ್ಜೆ ಇಡುವ ಮಗುವಿನಂತೆ ..
ಏನೋ ಸಾಹಸ ಮಾಡ ಹೊರಟಿವೆ... ////

ಸಾಕಾಯಿತೀಗ ಮಾಡಿ ಸರಣಿ ಕರೆಗಳನ್ನು ..
ನೋಡೋಮ್ಮೆ ನೀನು ನಿನ್ನೆದೆಯ ದೂರವಾಣಿಯನು ..
ಸ್ವೀಕರಿಸದ ಕರೆಗಳ ಪಟ್ಟಿಯಲಿ ಬರೀ ನನ್ನದೇ ಹೆಸರಿದೆ ...
ಹಟಮಾಡಿ ಅತ್ತು..
ದೂರ ಕೂತು..
ಮತ್ತೇ ಸಂಧಾನಕೆ ಸೋತು ..
ನೀನಕ್ಕ ನೆನಪಿನ್ನೂ ಹಸಿರಿದೆ.. //೨// 


------------------------------------------------------------------------------------------

Aug 7, 2010

ಮುದ್ದು !!!ಮುದ್ದು ...ಹೆಸರು ತುಂಬಾ ಮುದ್ದಾಗಿದೆ ಅಲ್ವಾ..!!!ಹೆಸರಿನಷ್ಟೇ ಮುದ್ದಾಗಿದೆ ಅವಳು ಬರೆಯುವ ಕವಿತೆಗಳು!!ನಾನು ಹೇಳ್ತಾ ಇರುವುದು ಹನ್ನೆರಡು ವರ್ಷದ ಪುಟಾಣಿ ಕವಯಿತ್ರಿ ಬಗ್ಗೆ..ಊರು ತೀರ್ಥಹಳ್ಳಿ..ಸದ್ಯ ಏಳನೇ ತರಗತಿಯ ವಿದ್ಯಾರ್ಥಿನಿ..ಆದರೆ ಇವಳು ಬರೆಯುವ ಕವನ ಲೇಖನ,ಕವನಗಳನ್ನು ಓದಿದಾಗ ನಿಮಗೆ ಇದು ಪುಟಾಣಿ ಹುಡುಗಿ ಬರೆದದ್ದಾ? ಎಂದು ಅನಿಸುತ್ತದೆ.. ಅವಳ ಕಲ್ಪನೆಗಳು ಅವಳು, ಬಳಸುವ ಶಬ್ದಗಳು ಎಲ್ಲವೂ ವಿಷೇಷ ವಾಗಿವೆ!ಎಲ್ಲಾ ಮಕ್ಕಳೂ ಇಂಗ್ಲೀಷ್ ಮೀಡಿಯಂಗೆ ಹೋಗ್ತೀನಿ ಅಂತಿದ್ರೆ ..ಇವಳು ಇಂಗ್ಲಿಶ್ ಮೀಡಿಯಂ ಶಾಲೆ ಬಿಟ್ಟು ಕನ್ನಡ ಮಾಧ್ಯಮ ಶಾಲೆ ಸೇರಿದ್ದಾಳೆ ಅಂತೆ..ತಾನು ಬರೆದ ಕತೆ,ಕವನ,ಲೇಖನಗಳನ್ನು ಬೇರೆ ಬೇರೆ ಪತ್ರಿಕೆಗಳಿಗೆ ಕಳುಹಿಸುತ್ತಿದ್ದಳು.ಅದು ಪ್ರಕಟಗೊಳ್ಳದೆ ಇದ್ದಾಗ ಬೇಜಾರಾಗಿ;ಅವಳೇ ಸ್ವಂತ ಪತ್ರಿಕೆಯನ್ನು ಪ್ರಾರಂಭಿಸುವ ಯೋಜನೆ ರೂಪಿಸಿದಳು ..ಈಗ ಕೈಬರಹದಲ್ಲಿ ಒಂದು ದ್ವೈಮಾಸಿಕ ಪತ್ರಿಕೆ ಪ್ರಕಟಿಸುತ್ತಿದ್ದಾಳೆ..ಪತ್ರಿಕೆಯ ಹೆಸರು 'ಮಂದಾನಿಲ "...ಎಷ್ಟೊಂದು ಅರ್ಥಪೂರ್ಣವಾಗಿದೆ!
ಇಲ್ಲಿ ನೋಡಿ "ಕೆಂಡಸಂಪಿಗೆ"ಯಲ್ಲಿ ಮುದ್ದು ಬರೆದ "ಮತ್ತೆ ಬಂತಲ್ಲ ಮಳೆ" ಕವಿತೆಯ ಸಾಲುಗಳನ್ನು..
"ಮುಂಗಾರಿನ ಆರಂಭದ ದಿನಗಳಲಿ
ಆರಂಭ ಶೂರನಂತೆ ಅಬ್ಬರಿಸಿ
ಬತ್ತಿ ಬರಡಾದ ಹೊಲ ಬಾವಿ
ನದಿ ಝರಿ ಕೆರೆಗಳ ಹಲ್ಕಿರಿದು ಅಣಕಿಸಿ
ಬರುವುದೇ ಇಲ್ಲವೆಂಬಂತೆ ಹೋದದ್ದು
ಮತ್ತೆ ಬಂತಲ್ಲ ಮಳೆ!
...
...ಮಕ್ಕಳು ಶಾಲೆಗೆ ಹೊರಟಾಗಲೇ
ಬಾಣಂತಿ ಕೂಸಿನ ಬಟ್ಟೆ
ಒಣಗಿಸುವಾಗಲೇ
ಮತ್ತೆ ಬಂತಲ್ಲ ಮಳೆ!
....
......ರೈತ ನಾಟಿಗೆ ಗದ್ದೆಗಳಲಿ ನೀರಿಗಿಳಿಯುವುದ
ಕಾಯುವ ಹೊತ್ತು
ಬಾಲಕನ ಶವವ ನೀರಿಂದ
ಮೇಲೆಳೆಯುವ ಹೊತ್ತು
ನೀರು ತುಂಬಿದ ಮನೆಗಳಲಿ
ಬಟ್ಟೆ ಪಾತ್ರೆ ತಡಕಾಡುವ ಹೊತ್ತು
ಸೊಂಟಮಟ್ಟ ನೀರಿನಲ್ಲಿ ನಿಂತು
ಬೀಳುವ ಮಾಡಿಗೆ
ಊರುಗೋಲು ನೆಡುವ ಹೊತ್ತು
ಹೊತ್ತು ನೋಡಿಯೇ
ಮತ್ತೆ ಬಂತಲ್ಲ ಮಳೆ!
"
///
"ಬಾಣಂತಿ ಕೂಸಿನ ಬಟ್ಟೆ ಒಣಗಿಸುತ್ತಿರುವ" ..."ನೀರು ತುಂಬಿದ ಮನೆಗಳಲಿ..." ...."ಹೊತ್ತು ನೋಡಿಯೇ ಮತ್ತೆ ಬಂತಲ್ಲ ಮಳೆ" ಸಾಲುಗಳಲ್ಲಿನ ಕಲ್ಪನೆ ಅದ್ಭುತ ವಾಗಿದೆ ಅಲ್ವಾ!!
ಮಲೆನಾಡಿನಲ್ಲಿ ಸುಂದರ ಪ್ರಕೃತಿ ಮಡಿಲಿನಲ್ಲಿ ಇದ್ದು ತನ್ನ ವಯಸ್ಸಿನ ಬೇರೆ ಮಕ್ಕಳಂತೆ ಅಲ್ಲದೆ ಪ್ರಪಂಚದ ಆಗುಹೋಗುಗಳನ್ನು, ಸುತ್ತಲಿನ ಪರಿಸರವನ್ನು ಕಾವ್ಯಾತ್ಮಕವಾಗಿ ಪ್ರಬುದ್ಧವಾಗಿ ವರ್ಣಿಸುವ ಕಲೆಯ ಬುದ್ಧಿ ಮುದ್ದುವಿಗೆ ಸಿದ್ಧಿಸಿದೆಯೇನೋ!!
ಉಜ್ವಲ ಭವಿಷ್ಯವನ್ನು ಹಾರೈಸೋಣ!!


------------------------------------------------------------------------------------------

Aug 5, 2010

ಮನಸ್ಸೊಳಗಿನ ಎಷ್ಟೋ ಮಾತುಗಳು..


ಮೊದಲ ನೋಟದಲ್ಲೇ ಪ್ರೀತಿಗೆ ಸೋತೆ ಎಂದು ಹೇಳುವ ಹುಡುಗನ ಬಗ್ಗೆ!!
ಸೋತನೋ ಗೆದ್ದನೋ....ಇನ್ನೂ ಮಾಹಿತಿ ಬಂದಿಲ್ಲ!!

------------------------------------------------------------------------------------------
ಮನಸ್ಸೊಳಗಿನ ಎಷ್ಟೋ ಮಾತುಗಳು ಬರುತಿಲ್ಲಾ ಹೊರಗೆ..
ಅವುಗಳಿಗೆ ಅಲ್ಲೇ ಇರಲು ಆಸೆಯೋ ಏನೋ ತಿಳಿದಿಲ್ಲ ನನಗೆ..
ನೀ ಕೇಳದೇ..ನಾ ಹೇಳದೇ..
ಕನಸುಗಳೆಲ್ಲ ಕನಸುಗಳಾಗಿಯೇ ಉಳಿವುದೋ ಏನೋ ಹೀಗೆ.. // //

ಕಿವಿಯ ಹಿಂಡಿ ನನ್ನ ಬುದ್ಧಿ...ಈಗ ಏನೂ ಬೇಡ ಅಂದಿದೆ ..
ಕಳ್ಳ ಮನಸು ಮೆಲ್ಲ ನಿನ್ನ...ಮತ್ತೆ ನೋಡು ಎನುತಿದೆ..
ವ್ಯಾಮೋಹ ಮೂಡಿದೆ...!
ನೋಡುತಾ ಕಾಡುವ ಕಂಗಳಾ.. ನನ್ನೋಳಗಡೆಯೇ ಗೊಂದಲ..
ಪ್ರೀತಿಯನೀಗ ಹೇಳಲಾ....ಪ್ರೀತಿಯನೀಗ ಹೇಳಲಾ.. //೧ //

ಒಲವಿನಿಂದ ಬರೆದು ಪತ್ರ ...ಇಡಲು ಕಿಟಕಿಯ ಅಂಚಲಿ....
ಹಾರಿ ಹೋಗಿ ಅದು ನಿನ್ನ...ಸೇರಿದ ಸುದ್ಧಿ ತಂದಿದೆ ತಂಗಾಳಿ...
ಖುಷಿಯಾದೆನು ಕೇಳಿ...!
ಪದಗಳನು ಸಾಲ ಪಡೆದು ....ಬರೆದಿರುವ ಓಲೆ ಅದು ..
ದಯಮಾಡಿ ಒಮ್ಮೆ ಓದು ..ದಯಮಾಡಿ ಒಮ್ಮೆ ಓದು .. .////
 
------------------------------------------------------------------------------------------