May 26, 2012

ವಿರಹ...ಹೃದಯದ ಹೊರಳಾಟ!

ಪ್ರೇಮವಂಚಿತ ಹುಡುಗಿ ,ವಿಧಿಯನ್ನು ಶಪಿಸುತ್ತಾ ಹೇಳಿದ ಅವಳ ಜೀವನದ ಕಥೆಯ ಕವನವಿದು!
--------------------------------------------------------------------------------------------


ಮೃದುಲ ಹೃದಯದ ಮೇಲೆ,ಚೂಪಾದ ಉಗುರಿನ ಗೀರು,
ಹುಚ್ಚು ಪ್ರೀತಿಯಿಂದ;
ಮಾಸದ ಗಾಯದ ಮೇಲೆ, ಸುರಿದಂತೆ ಉಪ್ಪಿನ ನೀರು..
ನೆನಪ ನೋವಿನಿಂದ!     ||ಪ||

ವಿಷಗಾಳಿಯ ಉಸಿರಾಟ,
ಧರೆಗುರುಳಿ ಧಗಧಗನೆ,
ಹೊತ್ತಿ ಉರಿಯುತಿದೆ ಕನಸ ಗೋಪುರ.
ಒಂದೆಂಬ ಬಂಧವನು ವಿಧಿ ಹಾಳುಮಾಡಿ,
ರಮಿಸುತಿದೆ ಕಣ್ಣೀರಿನಲ್ಲೇ ಸ್ನಾನ ಮಾಡಿ!  || ೧||

ವಿಷಮ ಪ್ರೀತಿಯಾಟ,
ಮರುಕದಲಿ ಮನಸಿನಲಿ,
ತುಂಬಿ ಹರಿಯುತಿದೆ ದುಃಖದ ಸಾಗರ.
ಶೋಕಲೋಕದಲ್ಲಿ ಏಕಾಂಗಿ ಪಯಣ,
ದಾರುಣ ಕೊನೆಯ ಕಥೆಯಿದು ಜೀವನ!   ||೨||
  ಚಿತ್ರ ಕೃಪೆ :www.wallpaperhere.com

 -------------------------------------------------------------------------------------------------------

May 19, 2012

ಹೀಗೊಂದು ಕವಿತೆ ...

ಸುಲಭ ಮತ್ತು ಇಷ್ಟ,
ಹಠಮಾರಿ ಪ್ರೇಯಸಿಯನ್ನು  ಸಂತೈಸುವುದು.
ಆದರೆ ಬಲು ಕಷ್ಟ,
ಕೋಪಿಸಿಕೊಂಡ ಪದಗಳನ್ನು ಸಮಾಧಾನಿಸುವುದು!

ಸುಮ್ಮನೆಂದರೆ ಹೇಗೆ ನಂಬುವುದು
ಓದಿದರೆ ನಿಮಗೇ ತಿಳಿಯುವುದು!

ಬಿಳಿಹಾಳೆ ,ಲೇಖನಿ ಹಿಡಿದು ಕೂತಾಗ,
ಯೋಚಿಸಿ,ಕಲ್ಪಿಸಿ ಬರೆಯಲನುವಾದಾಗ,
ನನಗೆ ಪ್ರತಿ ಪದಗಳ ಬೆಲೆ ತಿಳಿಯುವುದು;
ದೂರವೇ ಇರುತ್ತವೆ ಕರೆದಾಗ,
ಪರಿಚಯವಿರದವರಂತೆ!!

ಸ್ವಲ್ಪದಿನ ನಾನೇನೂ ಬರೆದಿಲ್ಲ ನಿಜ,
ಹಾಗೆಂದು ಕೋಪ ಬರುವುದು ಸಹಜ,
ಮುಂದೆ ಹೀಗಾಗದು ದಯಮಾಡಿ ಮನ್ನಿಸಿ;
ಎಂದು ನಾ ಬೇಡಲು ಸುಮ್ಮನಿದ್ದವು,
ಕಿವಿಕೇಳದವರಂತೆ!

ಕಾದೆನು ಸ್ವಲ್ಪ ಕರೆಂಟು ಹೋದ ಕತ್ತಲಲ್ಲಿ,
ಮತ್ತೆ ಪ್ರಯತ್ನಿಸಿದೆ ಮೇಣದ ಬತ್ತಿಯ ಬೆಳಕಿನಲ್ಲಿ,
ಬೆಳಕಿದ್ದರೂ ಸುತ್ತಲೂ ನನ್ನೊಳಗೆ ಕತ್ತಲು.
ಖುಷಿ ಕಸಿದುಕೊಂಡು ಪದಗಳೆಲ್ಲಾ ನಗುತ್ತಿರಲು
ಅಳು ಬಂದಂತಾಯಿತು!

ಎದ್ದೊಮ್ಮೆ ಹೋಗಿ ಕನ್ನಡಿಯ ನೋಡಿದೆ,
ನಿಜವೇ ಇದು,ನನ್ನ ಕಣ್ಣು ಕೆಂಪಾಗಿದೆ.
ಬಲು ಸುಲಭದ ಕೆಲಸ ಎಂದಿದ್ದ ನಾನೇ
ಬರೆಯಲಾರದೆ ಹೋದೆ  ಬೇಕೆನಿಸಿದಾಗ,
ಎಂಥ ವಿಪರ್ಯಾಸ!!

ಸಂತೈಸುವ ಕೆಲಸ ಮುಂದುವರೆಸಿದೆ
ಪದಗಳ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದೆ.
ನಮ್ಮ ಮರೆಯುವಿಯೇನು?ಉಹುಂ ಇಲ್ಲ,
ಅಹಂ ಇದೆಯೇನು?ಉಹುಂ ಇಲ್ಲ,
ಹೀಗೆ..ಸಾಗಿತ್ತು!

ಹಾಗೂ ಹೀಗೂ ಪದಗಳಿಗೆ ಸಮಾಧಾನವಾಯ್ತು,
ನನ್ನ ಸೋಮಾರಿತನದ ಪರಮಾವಧಿಗೆ ಶಿಕ್ಷೆಯಾಯ್ತು;
ಲೇಖನಿಗೇಕೆ ಪ್ರಸವ ವೇದನೆ ಎಂದು
ಪದಗಳು ತಾವಾಗಿಯೇ ಬಂದು,
ಕೂತವು ಸಾಲಿನಲ್ಲಿ !

ನಮ್ಮ ಹೆಚ್ಚು ಹೊಗಳದಿರು ಎಂಬ ಮಾತು ಪಡೆದು,
ಒಲವಿನಲಿ ಕರೆದಾಗ ಮತ್ತೆ ಬರುವೆವೆಂದು,
ಕಿವಿ ಹಿಂಡಿ ನುಡಿದವು ಪದಗಳೆಲ್ಲಾ ಒಟ್ಟಿನಲ್ಲಿ,
ಚಿಕ್ಕ ಮಗುವಿನಂತೆ ಎಲ್ಲದಕ್ಕೂ,
ಸರಿಯೆಂದೆ ನಾನು!

ಮೇಣ ಮುಗಿದು ದೀಪ ಆರಿತು,
ಮಧ್ಯ ರಾತ್ರಿ ,ಎಲ್ಲೆಲ್ಲೂ ಕತ್ತಲು,
ನನ್ನೊಳಗೆ ಮಾತ್ರ ಬೆಳಕು!

ಚಿತ್ರ ಕೃಪೆ: www.flickr.com 
-----------------------------------------------------------------------------------------------

May 13, 2012

ಅಮ್ಮ ಬೇಕಾಗಿದ್ದಾರೆ(ಳೆ)!!


ಅಳುತ್ತಾ ಜಳಕ ಮಾಡುವಾಗ,
ಜಿಗಿದು  ಬೆತ್ತಲೆ ಓಡುವಾಗ,
ಪ್ರೀತಿಯೇಟು ಕೊಟ್ಟಿದ್ದೆ ;
ಬಿದ್ದಷ್ಟೂ ಬಾರಿ,
ನನ್ನೆಬ್ಬಿಸುತ್ತಿದ್ದೆ.
ಈಗ ಮಾತ್ರ ಸುಮ್ಮನಿದ್ದೀಯ!
ನಾನು ದೊಡ್ದವನಾಗಬಯಸಿದ್ದು ನಿಜ;
ಆದರೆ ಈಗ ಮಗುವಾಗುವಾಸೆ ..
ಎಂಥ ವಿಪರ್ಯಾಸ!!

ಹಸಿವಿದ್ದರೂ..ಇರದಿದ್ದರೂ,
ಉಣಿಸುತ್ತಿದ್ದೆ ನನಗೆ,
ತೋರಿಸಿ ಗುಬ್ಬಿ ,ಗಿಣಿ,ಚಂದಮಾಮನನ್ನು!!
ಓದಿ ಸುಸ್ತಾಗಿ ಈಗ...
ದೊಡ್ಡ ಪುಸ್ತಕವೇ ತಲೆದಿಂಬು!!
ಭಾಸವಾಗುತಿದೆ ನಿದ್ದೆಯಿಂದೆಬ್ಬಿಸಿ ನೀನು..
ಊಟಕೆ ಬಾ ಎಂದು ಕರೆದಂತೆ!!

ಬೇಡವೆಂದರೂ ಮಳೆಯಲ್ಲಿ ನೆಂದು.
ಮರುದಿನ ಜ್ವರ,ನೆಗಡಿ..
ಬಯ್ಯುತ್ತಾ ನೀನು,
ಸಿಂಬಳ ಸುರಿವ ಮೂಗನೊರೆಸಿದ್ದು;
ನಾ ನಿನ್ನ ನಿದ್ದೆಗೆಡಿಸಿದ್ದು!!
ಎಲ್ಲಾ  ನೆನಪಾಗುತಿದೆ.
ಆಗ ಎಲ್ಲವನ್ನೂ ನೋಡುತ್ತಿದ್ದೆ,
ಬೆರಗುಗಣ್ಣಿನಿಂದ..
ಈಗ ನೀನೇ ವಿಸ್ಮಯ!!

ಮನೆ ಬಿಟ್ಟು ಹೊರಟಾಗ,
"ಜೋಪಾನ ಕಂದಾ..."ಎಂದು ನೀನಂದಿದ್ದು;
ನಂಗೆ ಅಷ್ಟೇನೂ ಗಂಭೀರವಾಣಿಯಾಗಿರಲಿಲ್ಲ.
ಆಚೆ ಬರುವ ಖುಷಿಯಲ್ಲಿ,
ಬೇರೆಲ್ಲಾ ಗೌಣವಾಗಿತ್ತು !!
ಗುರುತಿಸದೇ ಹೋದೆನಾನು;
ನಿನ್ನ ಕಣ್ಣ ಬಿಂದುವನ್ನು..!

ಪ್ರೀತಿಗೆ ಬರಬಂದಿದೆ,
ನಿನ್ನ ನೆನಪಾಗುತಿದೆ.
ರಚ್ಚೆ  ಹಿಡಿದು,
ರಪರಪನೆ ನಿನ್ನೆದೆಗೆ ಬಡಿದು;
ರಂಪ ಮಾಡಲಾರೆ ಅಂದಿನಂತೆ!
ನಿನ್ನ ಮಡಿಲಲ್ಲಿ ಒರಗಬೇಕೆನಿಸುತಿದೆ...
ಕೋಪ ಇಲ್ಲ ತಾನೇ!?
-------------------------------------------------------------------------------------------------------------------

ಕನ್ನಡ ಬ್ಲಾಗ್ ಪುಟದಲ್ಲಿ..(comments @KANNADA BLOG- facebook page)... 

ನೆನಪುಗಳು ಮಾತ್ರ ಮಧುರ


ತುಂಬಾ ಧನ್ಯವಾದ ನೆನಪುಗಳಿಗೆ!!!
ಜೊತೆಯಲಿ ನೀನು ಇರದಿರುವಾಗ
ನಿನ್ನನು ನನ್ನಲೇ..ನನ್ನನು ನಿನ್ನಲೇ ಹಿಡಿದಿಡಲು ಸಹಕರಿಸುವುದಕ್ಕೆ!!

ನಿನ್ನ ಚಿತ್ರದ ಮುಖದಲ್ಲಿ ನಾನು ಮೀಸೆ ಬರೆಯುವಾಗ..
ನೀನು ದಿಟ್ಟಿಸಿ ನೋಡಿದ್ದು ..ಅಟ್ಟಿಸಿಕೊಂಡು ಬಂದದ್ದು
ನಿನ್ನ ಅಂಗೈಯಲ್ಲಿ ನಾನು ಮದರಂಗಿ ಹಚ್ಚೆ ಹಾಕುವಾಗ..
ಭುಜ ತಾಗಿಸಿ ಕೂತಿದ್ದು ...ಕಣ್ಣು ಮಿಟುಕಿಸಿ ನಕ್ಕಿದ್ದು...

ಕನ್ನಡಿಯ ಮುಂದೆ ನೀನು ನೆಟಿಕೆ ಮುರಿಯುವಾಗ
ಕದದ ಹಿಂದೆ ನಿಂತು ..ತಿಳಿಯದಂತೆ ಕದ್ದಾಲಿಸಿದ್ದು..
ಸತಾಯಿಸಲು ನಾನು ಸುಮ್ಮನೆ ಸುಳ್ಳು ಹೇಳಿ ನಕ್ಕಾಗ . 
ನಿನ್ನ  ಮುಖ ಬಾಡಿದ್ದು..ನೀನು ಬೆನ್ನು ತಿರುಗಿಸಿದ್ದು ..

ಎಲ್ಲಾ ದೃಶ್ಯಗಳೂ ತೇಲಿ ಬರುತಿವೆ,
ಒಂದರ ಹಿಂದೆ ಒಂದರಂತೆ!!
ತಿರುತಿರುಗಿ ನೆನೆನೆನೆದು ಆ ಘಳಿಗೆ..
ಹೇಳುತ್ತಿರುವೆ ಧನ್ಯವಾದ ನೆನಪುಗಳಿಗೆ!
--------------------------------------------------------------------------------------------------------------------------------------
ಕನ್ನಡ ಬ್ಲಾಗ್ ಪುಟದಲ್ಲಿ..(comments @KANNADA BLOG- facebook page)...